ರಾಜರತ್ನಂ, ಜಿ ಪಿ
1908-79. ಹೊಸಗನ್ನಡ ಸಾಹಿತ್ಯದ ಸೃಜನಶೀಲ ಲೇಖಕರಲ್ಲಿ ಒಬ್ಬರು. ಕವಿ, ಲೇಖಕ ಅನುಪಮ ಶಿಶುಸಾಹಿತ್ಯ ಸೃಷ್ಟಿಕರ್ತ, ಶಿಕ್ಷಕ, ನಾನಾ ಧರ್ಮಗಳ ಸಮನ್ವಯ ಕರ್ತೃ, ಕನ್ನಡ ಸಾಹಿತ್ಯದ ಏಳ್ಗೆಗಾಗಿ ದುಡಿದ ಧೀಮಂತ. ಹುಟ್ಟಿದ್ದು ರಾಮನಗರದಲ್ಲಿ 1908 ಡಿಸೆಂಬರ್ 12ರಂದು. ಇವರದು ಪ್ರಸಿದ್ಧ ಗುಂಡ್ಲುಪಂಡಿತ ವಂಶ.

ಜೆ. ಪಿ. ರಾಜಯ್ಯಂಗಾರ್ ಎಂದು ನಾಮಾಂಕಿತರಾದ ಇವರು ತಾಯಿಯ ದೃಷ್ಟಿಯಲ್ಲಿ ರಾಜ ಆದರು. ಶಾಲಾ ಅಧ್ಯಾಪಕರೊಡನೆ ತುಂಟತನಕ್ಕಾಗಿ ಜೆ. ಪಿ. ರಾಜರತ್ನಂ ಎಂದು ಹೆಸರು ಬದಲಿಸಿಕೊಂಡು ಕನ್ನಡದ ರತ್ನವೇ ಆದರು. ತಂದೆ ಶಾಲಾ ಅಧ್ಯಾಪಕ. ಬಾಲ್ಯದಲ್ಲೇ ತಾಯಿಯ ಮರಣ. ಬಾಲ್ಯದಿಂದೂ ನಾಟಕದಲ್ಲಿ ಪಾತ್ರ; ಎ. ಆರ್. ಕೃಷ್ಣಶಾಸ್ತ್ರೀಗಳಿಂದ ಕನ್ನಡ ಸಾಹಿತ್ಯದ ಬಗ್ಗೆ ಆಸ್ಥೆ, ವೆಂಕಣ್ಣಯ್ಯ, ಬಿ.ಎಂ.ಶ್ರೀಯವರಂಥ ಗುರುಗಳ ಪ್ರಭಾವ. ವಿ. ಸೀತರಾಮಯ್ಯನವರ ಮಾರ್ಗದರ್ಶನದಿಂದ ಸಾಹಿತ್ಯ ಪ್ರವೇಶ. ಪದ್ಯ ಬರೆಯುವ ಗೀಳು. ಆಲೂರರ ಜಯಕರ್ನಾಟಕದಲ್ಲಿ ಮೊದಲು ಪ್ರಕಟಣೆ. ಕನ್ನಡದಲ್ಲಿ ಎಂ.ಎ. ಪದವಿ ಪಡೆದು ಕೆಲಸಕ್ಕಾಗಿ ಅಲೆಯುವಾಗ ಮಾಸ್ತಿಯವರ ಆದೇಶದಂತೆ ಸಾಹಿತ್ಯಕೃಷಿ ಆರಂಭಿಸಿ ಬೌದ್ಧಸಾಹಿತ್ಯವಾರಿಧಿಗೆ ಪ್ರವೇಶಿಸಿದರು. ಜೀವನ ನಿರ್ವಹಣೆಗಾಗಿ ಶಾಲಾ ಮಾಸ್ತರಿಕೆ, ಶಿಶುವಿಹಾರದಲ್ಲಿ ದುಡಿಮೆ. ಶಿಶುಸಾಹಿತ್ಯ ಕೃಷಿ, ಹೆಂಡತಿಯ ಮರಣ ಶಯ್ಯೆ, ಬಡತನ, ಸಂಸಾರದಭಾರ ಹೀಗೆ ನಾನಾ ವಿಧವಾಗಿ ಪಟ್ಟಪಾಡು ಹಾಡಾಗಿ ಮೂಡಿದ್ದು ಯಂಡ್ಕುಡುಕ ರತ್ನ, ಇವರ ತಾರೆ ಕವನಕ್ಕಾಗಿ ಶ್ರೀಯವರ ರಜತಮಹೋತ್ಸವ ಚಿನ್ನದಪದಕ. ತಂದೆ ಹಾಗೂ ಪತ್ನಿಯ ಮರಣ ಜೀವನವನ್ನು ಮತ್ತಷ್ಟು ಭೀಕರಮಾಡಿತು. ಏಕಾಂಗಿತನ ; ಗ್ರಂಥಗಳ ಆಸರೆ ; ಸಂಸ್ಕøತ, ಪಾಳಿ ಅರ್ಧಮಾಗದಿ ಕಲಿಕೆ : ಜಗತ್ತಿನ ಎಲ್ಲ ಧರ್ಮಗಳ ಮೂಲತತ್ತ್ವಗಳ ಅಭ್ಯಾಸ. ಅಧಿಕಾರವಾಣಿಯಿಂದ ಅದನ್ನು ತಿಳಿಸಿಹೇಳುವ ಪ್ರವಚನಕಾರನಾಗಿ ಬೆಳವಣಿಗೆ ಮರುವಿವಾಹ. ಸಾಹಿತ್ಯಕ ಸವಾಲು -ಉತ್ತರವಾಗಿ ಪುಸ್ತಕಗಳ ಸಾಲುಸಾಲು; ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಮುಖಸ್ಥಾನ. 1928-38ರ ನಡುವಿನ ಹತ್ತುವರ್ಷ ರಾಜರತ್ನಂ ಕಳೆದದ್ದು ಹೀಗೆ. 

ಅನಂತರ ಮೈಸೂರು ಕಾಲೇಜಿನಲ್ಲಿ ಪಂಡಿತನ ಕೆಲಸ (1938). ಬೆಂಗಳೂರು, ಶಿವಮೊಗ್ಗ, ತುಮಕೂರಿನಲ್ಲಿ ಸೇವೆ. ಪಾಠಹೇಳುವ ಠೀವಿ, ನಿಲವು ಗತ್ತು ಶಬ್ದಗಳ ಮೇಲೆ ಕೊಡುವ ಒತ್ತಿ, ಸ್ಪಷ್ಟ ಉಚ್ಛಾರಣೆ, ಉದಾಹರಣೆಗಳ ಔಚಿತ್ಯ, ಮೇಲಾಗಿ ಕಂಠ ಇವುಗಳಿಂದಾಗಿ ಯಶಸ್ವೀ ಅಧ್ಯಾಪಕ ಎನಿಸಿಕೊಂಡರು. ವೃತ್ತಿಯೇ ಪ್ರವೃತ್ತಿಯಾಯಿತು. ಪರೀಕ್ಷೆಗಳಿಗಿಂತ ವಿದ್ಯಾರ್ಥಿಗಳ ಆಸಕ್ತಿ ಅಭಿರುಚಿ ವ್ಯಕ್ತಿತ್ವಗಳನ್ನು ಬೆಳೆಸುವುದು ಪ್ರಧಾನವಾಯಿತು. ರೀಡರ್ ಆಗಿ ನಿವೃತ್ತಿ (1964). ಅನಂತರ ಯು.ಜಿ.ಸಿ. ಉಪಾಧ್ಯಾಯ ನಿವೃತ್ತರಾದಾಗಲೂ ಉತ್ಸಾಹದ ಚಿಲುಮೆ; ಸಂತತ ದುಡಿಮೆ. ಹುಟ್ಟಿದ್ದು ಹುಣ್ಣಿಮೆಯೆಂದು; ಮರಣವೂ ಹುಣ್ಣಿಮೆಯೆಂದೇ 13 ಮಾರ್ಚ್ 1979. 

ರಾಜರತ್ನಂ ಅವರದು ದಿಟ್ಟ ನಿಲವು. ಸುಂದರ ಆಕೃತಿ, ಕಂಚಿನ ಕಂಠ ಅಸ್ಖಲಿತ-ವಾಣಿ. ಇವರ ಪ್ರಾಮಾಣಿಕತೆ, ಧೈರ್ಯ, ಛಲ, ಅಚ್ಚುಕಟ್ಟು ಶಿಸ್ತು, ಶುದ್ದ ಬದುಕು, ಕಷ್ಟಗಳನ್ನು ಎದುರಿಸಿದ ರೀತಿ ಅಪರೂಪದ್ದು. ಖಾದಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದರು ಮತ್ತು ಅದರ ಹಿಂದಿನ ತತ್ತ್ವಗಳಿಗಾಗಿ ಬಾಳಿದರು. ಗ್ರಂಥರಚನೆ ಇವರ ಎರಡನೆಯ ಸ್ವಭಾವವಾಗಿತ್ತು. ಸವಾಲು ಹಾಕುವುದು ಸವಾಲು ಎದುರಿಸುವುದು ಇವರ ಬದುಕಿನ ವೈಶಿಷ್ಟ್ಯ. ಅಪಚಾರ, ಕಪಟ, ದೊಡ್ಡಸ್ತಿಕೆ - ಯಾವುದೂ ಸುಳಿಯದ ಮನಸ್ಸು.

1928ರಿಂದ 78ರ ತನಕ ನಿರಂತರ ಅರ್ಧಶತಮಾನದ ಸಾಹಿತ್ಯ ಸೇವೆ, 281 ಪುಸ್ತಕಗಳ ರಚನೆ ಪ್ರಕಟಣೆ, ಕವನ ನಾಟಕ, ಕತೆ, ಪ್ರಬಂದ, ವಿಡಂಬನೆ, ಜೀವನಚರಿತ್ರೆ. ಕವಿಪರಿಚಯ, ವಿಮರ್ಶೆ ವೈಚಾರಿಕ ಬರೆಹ, ಶಿಶುಸಾಹಿತ್ಯ ಧಾರ್ಮಿಕ ಸಾಹಿತ್ಯ. _ ಹೀಗೆ ವೈವಿದ್ಯ ಹರಹು.

ಇವರ ರತ್ನನ ಪದಗಳು (1934) ಕನ್ನಡ ಸಾಹಿತ್ಯದಲ್ಲೇ ಒಂದು ಹೊಸಮಾರ್ಗ ತೆರೆಯಿತು. ಇದಕ್ಕೆ ಪೂರಕವಾಗಿ ಬಂದದ್ದು ನಾಗನ ಪದಗಳು (1952). 14 ಪದ್ಯಗಳ ಯೆಂಡ್ಕುಡಕ ರತ್ನ (1932) 77 ಪದ್ಯಗಳ ರತ್ನನ ಪದಗಳಾಗಿ (1934) ಬೆಳೆಯಿತು. ನವೋದಯದಯ ಸಂಧಿಕಾಲದಲ್ಲಿ ಬಂದ ವಿಶಿಷ್ಟಕೃತಿ ಇದು. ಇಲ್ಲಿ ಯೆಂಡ್ಕುಡಕ ರತ್ನನ ಪರಿಸರ, ರತ್ನ -ಪುಟ್ನಂಜಿಯರ ಅಕಳಂಕ ಪ್ರೇಮ. ಮುನಿಯನ ಶೋಷಕ ಪ್ರವೃತ್ತಿ, ಕುಡುಕರ ಮನೋಭಾವಗಳನ್ನು ಕವಿ ಮೈಸೂರು ಕಡೆಯ ಗ್ರಾಮ್ಯ ಭಾಷೆಯಲ್ಲಿ ಸೆರೆ ಹಿಡಿದಿದ್ದಾರೆ. ಇಂಥ ಭಾಷೆಯನ್ನು ಯಶಸ್ವಿಯಾಗಿ ಬಳಸುವ ಮೂಲಕವೇ ಇವರಿಗೆ ಕನ್ನಡ ಕಾವ್ಯದಲ್ಲಿ ವಿಶಿಷ್ಟ ಸ್ಥಾನ ಲಭಿಸಿದ್ದು. ಇದು ಕನ್ನಡ ನವೋದಯ ಕಾವ್ಯದ ಪ್ರಥಮ ಬಂಡಾಯಕಾವ್ಯ ಎಂದೂ ಕೆಲವರ ಅಭಿಪ್ರಾಯ. ಇದೇ ಮಾದರಿಯಲ್ಲಿ ಬಂದ ನಾಗನ ಪದಗಳು ತನ್ನ ಮಿತಿಯಲ್ಲೇ ಬಾಳಿನ ಸಾರ್ಥಕತೆಯನ್ನು ಕಾಣುವ ನಾಗನ ಸಂಸಾರದ ಚಿತ್ರಣ. ಮುಕ್ತವಾದ ವೈವಿಧ್ಯಪೂರ್ಣ ಛಂದಸ್ಸು. ಗದ್ಯಕ್ಕೆ ಹತ್ತಿರವಾದ ನಾದ, ಲಯ ಇವುಗಳಿಂದ ಚೇತೋಹಾರಿಯಾದ ದುರಂತ ದಾಂಪತ್ಯದ ನೆನಹಿದ್ದರೆ, ನಾಗನ ಪದಗಳಲ್ಲಿ ಎರಡನೆಯ ಸಂಬಂಧದ ಸಫಲ ದಾಂಪತ್ಯದ ಹೊಳಹುಗಳಿವೆ ಎಂಬ ಅಭಿಪ್ರಾಯವಿದೆ. ಇವಲ್ಲದೆ ಶಾಂತಿ (1934), ನೂರುಪುಟಾಣಿ (1910) ಮೊದಲಾದ 7 ಕವನಸಂಕಲನಗಳು ಪ್ರಕಟವಾಗಿವೆ. 

ರತ್ನನ ಪದಗಳನ್ನು ಬಿಟ್ಟರೆ ಇವರ ಪ್ರತಿಭೆ ಕಾಣುವುದು ಶಿಶುಸಾಹಿತ್ಯದಲ್ಲಿ ಇದು ರಾಜರತ್ನಂಗೆ ಪ್ರಿಯವಾದ ಕ್ಷೇತ್ರ. ಇವರೇ ಇಲ್ಲಕಿ ಅಗ್ರಗಣ್ಯರು. ಮಕ್ಕಳಿಗಾಗಿ 11 ಕವನ ಸಂಕಲನ, 12 ಜೀವನಚಿತ್ರ, 7 ರೂಪಕ, 55 ಕಥಾಗುಚ್ಚ, ಚುಟುಕ ನಾಟಕಗಳೂ ಸೇರಿದಂತೆ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. 3-4 ವಯಸ್ಸಿನಿಂದ ಹಿಡಿದು 7 ನೆಯ ತರಗತಿಯ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಅಭಿರುಚಿಗೆ ತಕ್ಕಂತೆ ಹಾಡುಕಟ್ಟಿ ಮನಸ್ಸನ್ನು ಹದಮಾಡಿ, ವಿಚಾರದ ಬೀಜಬಿತ್ತಲು ತಿಳಿದಿದ್ದ ಶಿಶುಮನೋವಿe್ಞÁನಿ ಇವರು. ಸರಳಪದ ಸಂಬಂಧ, ಲಲಿತ ಛಂದೋಗತಿ, ರಾಗ-ತಾಳಗಳಿಗೂ ಮೇಳವಿರುವ ಯತಿ ಗತಿ - ಇವುಗಳ ಬಲದಿಂದ ಕವನ ಕಟ್ಟಿದರೂವಾರಿ. ಚುಟುಕ (1933), ಕೆನೆಹಾಲು (1935), ಕಲ್ಲುಸಕ್ಕರೆ (1935), ತಾರೆ (1947) -ಇವು ಇಂಥ ಕೆಲವು ಸಂಕಲನಗಳು. ತುತ್ತೂರಿ, ಕಡಲೆಪುರಿ ಅತ್ಯಂತ ಜನಪ್ರಿಯ ಸಂಕಲನಗಳು. ಕಂದನ ಕಾವ್ಯಮಾಲೆ ಮಕ್ಕಳ ವರ್ಷಕ್ಕಾಗಿ ಇವರ 6 ಸಂಕಲನಗಳ 100 ಕವನಗಳನ್ನು ಸಂಕಲಿಸಿದ ಪುಸ್ತಕ. ಶಿಶುಪ್ರಾಸ ರಚನೆಗೆ ಅನೇಕರು ಇವರಿಂದ ಪ್ರೇರಣೆ ಪಡೆದರು. ಚುಟುಕ ಶಬ್ದವನ್ನು ಮೊದಲು ಬಳಸಿ ಪ್ರಯೋಗ ನಡೆಸಿದವರು ಇವರು. ಸುಧಾ, ಮಯೂರ ಈ ಪತ್ರಿಕೆಗಳಲ್ಲಿ ಕ್ರಮವಾಗಿ ಇವರ ಮಕ್ಕಳ ಕತೆಗಳು ಪ್ರಕಟವಾಗಿ ಮಕ್ಕಳ ಸಾಹಿತ್ಯ ವಿಸ್ತಾರಗೊಂಡಿತು. ಇದರ 64 ಮಕ್ಕಳ ಕತೆಗಳು ಸಂಕಲನ ಕಥಾಕೋಶ, 1965-79 ರ ನಡುವೆ 800ಕ್ಕೂ ಮೀರಿ ಇವರ ಕತೆಗಳು ಪ್ರಕಟವಾಗಿವೆ. ಬುದ್ದ ಜಾತಕ ಕತೆಗಳು, ಪಂಚತಂತ್ರದ ಕತೆಗಳನ್ನೊಳಗೊಂಡ ಹಲವು ನೀತಿ ಕತೆಗಳು, ಬೈಬಲ್, ಖುರನ್ ವೇದ ಪುರಾಣಗಳಿಂದ ಉದ್ಧರಿಸಿದ ಕತೆಗಳು ಯಾವ ಕಾಲಕ್ಕೂ ಮಕ್ಕಳಿಗೆ ಪ್ರಿಯವಾಗುವಂಥವು. ಮಕ್ಕಳ ಕತೆಗಳನ್ನು ಪ್ರಕಟಿಸುವುದಕ್ಕಾಗಿಯೇ ಅನೇಕ ಪುಸ್ತಕ ಮಾಲೆಗಳನ್ನು ರಾಜರತ್ನಂ ಪ್ರಾರಂಭಿಸಿದರು. ಮಕ್ಕಳಿಗಾಗಿ ಗಿಳಿಮರಿಗಳ ಗಾಂಧಿ, ಗಾಂಧಿ ವಿದ್ಯೆ, ವಂದೇ ಗಾಂಧಿಜಿ, ಸ್ವತಂತ್ರ ಭಾರತದ ಅಶೋಕ ಚಕ್ರಧ್ವಜ - ಹೀಗೆ ವೈಚಾರಿಕ ಬರೆಹಗಳೂ ಬಂದಿವೆ.

ಇವರ 14 ನಾಟಕ, ರೂಪಕಗಳು ಬಂದಿವೆ. ಬಹುತೇಕ ಕಥಾವಸ್ತು ಬೇರೆಬೇರೆ ಮೂಲಗಳಿಂದ ಪಡೆದದ್ದು. ಆದರೆ ವಸ್ತುಚಿತ್ರಣ, ಕಥನರೀತಿ, ಪಾತ್ರ ಪೋಷಣೆ, ಸಂಭಾಷಣೆಯಲ್ಲಿ ತಮ್ಮತನದ ಮೆರುಗು ನೀಡಿ ಯಶಸ್ಸು ಸಾಧಿಸಿದ್ದಾರೆ. ಜನಪ್ರಿಯ ನಾಟಕಗಳಾದ ಕಂಬಳಿಸೇವೆ, ನರಕದಲ್ಲಿ ನ್ಯಾಯ, ಶಕಾರನ ಶಾರೋಟು - ಇವುಗಳಲ್ಲಿ ಇತ್ತೀಚಿನ ನಾಟಕಗಳಲ್ಲಿ ನಿರೀಕ್ಷಿಸುವ ಸಾಮಾಜಿಕ ಬದ್ಧತೆ ಹಾಗೂ ಬಂಡಾಯದ ಅಂಶಗಳಿವೆ. ಸರಳರಗಳೆಯಲ್ಲಿ ಬರೆದ ಇವರ ಪ್ರಸಿದ್ಧ ನಾಟಕ ಗಂಡುಗೊಡಲಿ(1932), ಆಗಿನ ರಾಜಕೀಯವನ್ನು ಹಿನ್ನೆಲೆಯಾಗಿ ಮಾಡಿಕೊಂಡು ಒಂದು ಪ್ರತಿಮಾ ವಿಧಾನದ ರೂಪಕವಾಗಿ ಪರಶುರಾಮನ ಕಥೆಯನ್ನು ಬಳಸಿಕೊಂಡು ರಚಿಸಿದ್ದು. ಇದು ಅಂದಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿ ನೀಡಿದ್ದ ನಾಟಕ.

1931 ರಿಂದಲೂ ಬೌದ್ಧ ವ್ಯಾಸಂಗದಲ್ಲಿ ನಿರತರಾಗಿ ಬೌದ್ಧ, ಜೈನ ಕತೆಗಳನ್ನು ಸುಧಾ ವಾರಪತ್ರಿಕೆಗಾಗಿ ಬರೆದ ರಾಜರತ್ನಂ ಆ ಸಾಹಿತ್ಯದ ಪ್ರಕಟಣೆಗಾಗಿ ಶಾಕ್ಯ ಸಾಹಿತ್ಯ ಮಂಟಪವನ್ನೇ ಸ್ಥಾಪಿಸಿದರು. ಬೌದ್ಧ ಧರ್ಮದ ಇತಿಹಾಸವನ್ನು ಕನ್ನಡದಲ್ಲಿ ಮೊತ್ತಮೊದಲು ತಂದವರು ಇವರು. ಆ ಸಾಹಿತ್ಯವನ್ನು ಸಮಗ್ರವಾಗಿ ಅನುವಾದ ಮಾಡದಿದ್ದರೂ ಅದರ ಸಾರವನ್ನು ಲೋಪವಿಲ್ಲದಂತೆ ತಂದಿದ್ದಾರೆ. ಇದರಲ್ಲಿ ಕಥೆ, ಕವನ, ದೃಷ್ಟಾಂತ ಪ್ರಸಂಗಗಳು 16; ಧರ್ಮದಾನಿಬುದ್ಧ (1933), ಬುದ್ಧನ ಕತೆಗಳು (1940), ಜಾತಕ ಕತೆಗಳು (1941), ಚೀನಾದೇಶದ ಬೌದ್ಧ ಯಾತ್ರಿಕರು ಎಂಬ ಪ್ರವಾಸ ಕಥನ. ವೈಶಾಖಶುದ್ಧ ಪೂರ್ಣಿಮಾ ಎಂಬ ಸಂಪಾದಿತ ಕೃತಿ; ಬುದ್ಧ ವಚನಪರಿಚಯ (1937), ಪಾಲಿಪಜ್ಜ ಪುಷ್ಪಾಂಜಲಿ (1937), ಧಮ್ಮಪದ (1945) ಮುಂತಾದ 10 ಧರ್ಮಪರಿಚಯದ ಪುಸ್ತಕಗಳು ಬಂದಿವೆ. ಹಾಗೆಯೇ ಭರತೇಶವೈಭವವನ್ನು ಆದರಿಸಿದ 3 ಗೀತರೂಪಕಗಳು, ಜೈನ ಶಾಸನಗಳು ಮತ್ತು ಪ್ರಾಚೀನ ಕೃತಿಗಳನ್ನು ಆದರಿಸಿದ ವೀರಮಾರ್ತಾಂಡ ಚಾವುಂಡರಾಯ ಎಂಬ ಶಬ್ದಚಿತ್ರ, ಮಹಾವೀರನ ಮಾತುಕತೆ (1937), ಶ್ರೀ ಗೋಮ್ಮಟೇಶ್ವರ (1938), ಭಗವಾನ್ಮಹಾವೀರಸ್ವಾಮಿ (1938) ಮುಂತಾದ ಇತರ ಆರು ಜೈನಕೃತಿಗಳೂ ಬಂದಿವೆ. ರಾಜರತ್ನಂ ಅವರ ದೃಷ್ಟಿಕೋನವೇ ಧಾರ್ಮಿಕವಾದುದು. ಇವರು ಪರಂಪರೆಯ ಬಗೆಗೆ ಆಸಕ್ತರಾಗಿದವರು. ಅದರ ಉತ್ತಮ ಅಂಶಗಳನ್ನು ಜನಪ್ರಿಯಗೊಳಿಸಲು ಹೆಣಗಿದರು. ಇವರು ರಚಿಸಿದ 21 ವಿಷ್ಣುಭಕ್ತಿ ಕೃತಿಗಳು, 11 ಸತ್ಯಸಾಯಿ ಸಾಹಿತ್ಯ, 9 ಧರ್ಮ ನೀತಿಯ ಕೃತಿಗಳೂ ಈ ದೃಷ್ಟಿಯಿಂದ ಗಮನಿಸಬೇಕಾದಂಥವು.

ರಾಜರತ್ನಂ ಆಕಾಶವಾಣಿಗಾಗಿ ಸಿದ್ಧಪಡಿಸುತ್ತಿದ್ದ ವಿಚಾರದೀಪ್ತಿ; ಸುಧಾ ಪತ್ರಿಕೆಗಾಗಿ ಭ್ರಮರನಾಗಿ ಸಿದ್ಧಪಡಿಸಿದ ವಿಚಾರರಶ್ಮಿ. ಆರಂಭದಲ್ಲಿ ಬರೆಯುತ್ತಿದ್ದ ಹನಿಗಳು (1953), ಪ್ರಜಾವಾಣಿಯಲ್ಲಿ ಬಂದ ವಿಚಾರಸರಣಿ -ಇವುಗಳಲ್ಲಿ ಇವರ ಆಳವಾದ ಪಾಂಡಿತ್ಯ ಹಾಗೂ ವಿಚಾರದ ಎಳೆಯನ್ನು ಕಾಣಬಹುದು. ವಿಚಾರ ತರಂಗ (1967), ಕಿರಣಾನುಭವ (1968), ಸಭಾವಿನಯ (1969), ಸ್ವಾರಸ್ಯ, ವಿಚಾರರಶ್ಮಿ ಮೊದಲಾದ 14 ಪುಸ್ತಕಗಳಲ್ಲಿ ಇವರ ಅಧ್ಯಯನಪೂರ್ಣ ಲೇಖನಗಳು ಪ್ರಕಟವಾಗಿವೆ. ರಾಜರತ್ನಂ ಕ್ರತು ಮನಸ್ಸಿಗೆ ಕನ್ನಡಿ ವಿಚಾರರಶ್ಮಿ. ಅರ್ಧ ಶತಮಾನಕ್ಕೂ ಮೀರಿದ ಇವರ ಲೋಕe್ಞÁನ, ಶಾಸ್ತ್ರe್ಞÁನ, ಸಾಹಿತ್ಯe್ಞÁನ ಮತ್ತು ಇನ್ನಿತರ ಅನುಭವಕ್ಕೆ ಇಲ್ಲಿಯ ಒಂದೊಂದು ಬಿಂದುಗಳೂ ಸಾಕ್ಷಿ. ಇವು ಕೇವಲ ಅಂದಂದಿನ ಸಂಗತಿಗಳಿಗೆ ತೋರಿದ ಪ್ರತಿಕ್ರಿಯೆ ಮಾತ್ರವಾಗಿ ಉಳಿಯದೇ, ತಾತ್ಕಾಲಿಕ ಉದ್ದೇಶಗಳಿಗೆ ಸೀಮಿತವಾಗದೇ, ಸಾರ್ವಕಾಲಿಕವಾಗಿ ಸಲ್ಲುವ ಲಕ್ಷಣವನ್ನು ಒಳಗೊಂಡಿವೆ. ನೈತಿಕ ದೃಷ್ಟಿಯಲ್ಲೇ ಇಲ್ಲಿ ಪ್ರಧಾನ, ಪ್ರೊಫೆಸರ್ ವೆಂಕಣ್ಣಯ್ಯ ಸ್ಮಾರಕ ಉಪನ್ಯಾಸಗಳು ಮಹಾತ್ಮರ ಮರಣ ಮತ್ತು ಇತರ ಉಪನ್ಯಾಸಗಳು ಇತ್ಯಾದಿಯಾದ ಹಲವು ಭಾಷಣ ಲೇಖನಗಳು 13 ಪುಸ್ತಕ ರೂಪದಲ್ಲಿ ಬಂದಿವೆ. ಇವಲ್ಲದೇ ಕ್ಯಾಂಡಿಡ್ ಅನುವಾದವೂ ಸೇರಿದಂತೆ 5 ಕತೆಗಳ ಪುಸ್ತಕಗಳೂ ಬಂದಿವೆ. 

ಗೋಖಲೆ, ಗಾಂಧಿಯವರ ಜೀವನಾದರ್ಶಗಳನ್ನು ಮಾದರಿಯಾಗಿಟ್ಟುಕೊಂಡು ಹೃತ್ಪೂರ್ವಕ ಹಾಗೂ ನಿಸ್ಪøಹ ಸೇವೆಯಿಂದ ಆ ಗುರಿ ಮುಟ್ಟಲು ಯತ್ನಿಸಿದವರು ರಾಜರತ್ನಂ. ಸಾಹಿತ್ಯ ಮಾಧ್ಯಮದ ಮೂಲಕ ರಾಷ್ಟ್ರ ಭಕ್ತಿಯನ್ನೂ ರಾಷ್ಟ್ರ ಪ್ರಜ್ಞೆಯನ್ನೂ ಮೂಡಿಸುವಲ್ಲಿ ತಮ್ಮದೇ ವಿಧಾನ ಅನುಸರಿಸಿದವರು. ಸ್ವಾತಂತ್ರ್ಯ ಬಂದ ತರುವಾಯ ಇವರು ಮಾಡಿದಮೊದಲ ಕೆಲಸ ರಾಷ್ಟ್ರ ಸಂಕೇತಗಳ ಪರಿಚಯ ಮಾಡಿಕೊಟ್ಟಿದ್ದು. ರಾಷ್ಟ್ರಭಕ್ತಿ ಸಾಹಿತ್ಯಕ್ಕೆ ಆಸರೆಯಾದದ್ದು ಇವರ 40 ವರ್ಷಗಳ ಒಡನಾಟಕ ಗಾಂಧೀ ಸಾಹಿತ್ಯ ಸಂಘ. ಇಲ್ಲಿ 400 ಕ್ಕೂ ಹೆಚ್ಚು ಉಪನ್ಯಾಸಗಳನ್ನು ನಡೆಸಿಕೊಟ್ಟಿದ್ದಾರೆ.

ವಿಡಂಬನೆ ರಾಜರತ್ನಂ ಅವರ ಸಾಹಿತ್ಯದ ಒಂದು ಭಾಗ. ಸಾಹಿತ್ಯ ರೂಪಕವಾಗಿ ವಿಡಂಬನೆಯನ್ನು ಕುರಿತ ಪಾಂಡಿತ್ಯಪೂರ್ಣ ವ್ಯಾಖ್ಯಾನ ಮಹಾಕವಿ ಪುರುಷಸರಸ್ವತಿ (1940). ಒಣಪಾಂಡಿತ್ಯ, ಒಣಹೆಮ್ಮೆ ಈ ಕೃತಿಯಲ್ಲಿ ಮುಖ್ಯವಾಗಿ ವಿಡಂಬನೆಗೆ ವಸ್ತು. ಲೇವಡಿ ಮಾಡುತ್ತಲೇ ಕೋಪದ ಅಂಶವಿಲ್ಲದೇ ಖುಷಿ ಪಡುವ ಮನಸ್ಸನ್ನು ಇಲ್ಲಿ ಕಾಣಬಹುದು. ಉದ್ದಕ್ಕೂ ಒಂದು ಶಕ್ತಿಯುತ ವ್ಯಕ್ತಿತ್ವದ ಅನುಭವವಾಗುತ್ತದೆ. ವಿಡಂಬನಾಕೃತಿಗಳಾಗಿ ಅಪಕಥಾವಲ್ಲರಿ, ಪರಗತಿಪಕ್ಷ ಪ್ರಕಟಗೊಂಡಿವೆ. 1974-77ರ ನಡುವೆ ತಮ್ಮ ಮೇಲಿನ ಕ್ಷುದ್ರ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ವ್ಯಂಗ್ಯ- ವಿನೋದ ತುಂಬಿದ 9 ಕಂತುಗಳ ನಿರ್ಭಯಗ್ರಫಿ ಬರೆದರು. ಇವರ ಅಂತರಂಗದ ದರ್ಶನ ಇಲ್ಲಿದೆ. ಆಗಾಗ ಬರೆದ ಮುನ್ನುಡಿ ಹಿನ್ನುಡಿಗಳಲ್ಲೂ ಸಾಹಿತ್ಯ ಕೃಷಿಗೆ ಸಂಬಂಧಿಸಿದ ಉಲ್ಲೇಖಗಳಿವೆ. 1978ರಲ್ಲಿ ಕಾದಂಬರಿ ಎಂಬ ಮಾಸಿಕದಲ್ಲಿ ಲೇಖನ ವ್ಯವಸಾಯದ ಮಜಲುಗಳನ್ನು ನನ್ನ ನೆನಪಿನ ಬೀಡು ಎಂಬ ಹೆಸರಿನಲ್ಲಿ ಗುರುತಿಸಲು ತೊಡಗಿದ್ದರು.

ವಿದ್ಯಾರ್ಥಿಗಳಲ್ಲೂ ಸಾಮಾನ್ಯರಲ್ಲೂ ಸಾಹಿತ್ಯಾಭಿರುಚಿಯನ್ನು ಉಂಟುಮಾಡುವ ತಮ್ಮಕಾಯಕಕ್ಕಾಗಿ ತಮ್ಮನ್ನು ಕನ್ನಡದಪರಿಚಾರ, ಕನ್ನಡಗರಡಿಯಾಳು ಎಂದು ಸಂತೋಷದಿಂದ ಕರೆದುಕೊಂಡರು. ಈ ಕಾರ್ಯದಲ್ಲಿ ಇವರ ಸಾಹಿತ್ಯಾಭಿಮಾನ, ಸೂಕ್ಷ್ಮ ಕೃಷ್ಟಿ, ತೌಲನಿಕ ವಿವೇಚನೆ, ಸಂಶೋಧನ ಕ್ರಮಗಳು ನಿಚ್ಚಳವಾಗಿ ಕಾಣುತ್ತವೆ. ಹಳಗನ್ನಡಕ್ಕೆ ಸಹಾಯಕವಾದ ಇವರ 15 ಕೃತಿಗಳಲ್ಲಿ ರನ್ನನ ರಸಘಟ್ಟಿ (1948), ಹೊಸಗನ್ನಡ ಯಶೋಧರ ಚರಿತ್ರೆ (1944), ಶ್ರೀಕವಿರತ್ನ (1948), ಶ್ರೀಕವಿಪಂಪ (1951) ಸೇರಿವೆ. ಆಧುನಿಕರಲ್ಲೂ ಕೈಲಾಸಂ, ಸಂಸ, ಡಿ.ವಿ.ಜಿ., ಗೋವಿಂದ ಪೈ, ವೆಂಕಣ್ಣಯ್ಯ ಮೊದಲಾದ ಕವಿ-ಕೃತಿ ಪರಿಚಯ ಮಾಡಿಕೊಟ್ಟಿದ್ದಾರೆ. ಸಂಸರ ಹೆಸರು ಮಾಸದಂತೆ ಮಾಡಿದವರು ರಾಜರತ್ನಂ. ಈ ಗುಂಪಿನ 21 ಕೃತಿಗಳ ಪೈಕಿ 14 ಕೈಲಾಸಂಗೆ ಸಂಬಂಧಪಟ್ಟವು. ವಿದ್ಯಾರ್ಥಿಗಳ ಅನುಕೂಲಕ್ಕೆಂದೇ 12 e್ಞÁಪಕ ರೂಪಗಳನ್ನು ಪ್ರಕಟಿಸಿದರು. ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವನ್ನು ಪುನರುಜ್ಜೀವಿಸಿ ರತ್ನಪರ್ವದಲ್ಲೂ ಎ.ಆರ್. ಕೃಷ್ಣಶಾಸ್ತ್ರಿಗಳ ಕ್ರಷ್ಣಪರ್ವದ ಹಾಗೆ 51 ಕೃತಿಗಳನ್ನು ಪ್ರಕಟಿಸಿದರು. ಆದರೆ ಕಾಲೇಜು ಬರವಣಿಗೆ ಎಂಬ ಮಾಲೆಯಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆಗೆ ಇಂಬು ಸಿಕ್ಕಿದ್ದು ರತ್ನಪರ್ವದ ವಿಶೇಷ. ನಮ್ಮನಮ್ಮವರು, ನಮ್ಮ ಬೇಂದ್ರೆಯವರು ಅಲ್ಲದೇ ಸೆಂಟ್ರಲ್ ಕಾಲೇಜು ಕರ್ನಾಟಕ ಸಂಘದಿಂದಲೇ 13 ವಿದ್ಯಾರ್ಥಿ ಪ್ರಕಟಣೆಗಳು ಬಂದವು. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಆತ್ಮವಿಶ್ವಾಸ ಹುಟ್ಟಿಸಿದ್ದು. ಸಹಾಯಕ ಸಾಮಗ್ರಿ ಒದಗಿಸಿದ್ದು ಬರೆವಣಿಗೆಯನ್ನು ತಿದ್ದಿ ತೋರಿಸಿದ್ದು - ರಾಜರತ್ನಂ ಮಾಡಿದ ಕೆಲಸ. ಆ ಮಾರ್ಗದರ್ಶನದ ಫಲವಾಗಿ ಅರಳಿದವರು ಹಲವರು. ತಮ್ಮದಕ್ಕಿಂತ ಇತರರ ಬರೆವಣಿಗೆಗೆ ಹೆಚ್ಚು ಮಹತ್ತ್ವ ಕೊಟ್ಟರು. ಇತರ ಸಾಹಿತಿಗಳ 21 ಕೃತಿಗಳನ್ನು ಪ್ರಕಟಿಸಿದರು. ಪುಸ್ತಕ ಸಣ್ಣದಾಗಿರಬೇಕು, ಶೈಲಿ ಸುಲಭವಾಗಿರಬೇಕು, ಮುದ್ರಣ ಚೆನ್ನಾಗಿರಬೇಕು, ಬೆಲೆ ಕಡಿಮೆ ಇರಬೇಕು - ಈ ಅಂಶಗಳೇ ಇವರ ಗ್ರಂಥ ಪ್ರಕಾಶನದ ಗುರಿಯಾಗಿತ್ತು. ಯಾರದೇ ಒಳ್ಳೆಯ ಗ್ರಂಥಗಳು - ಪ್ರಸಿದ್ಧರು, ಅಪ್ರಸಿದ್ಧರು, ಹಿರಿಯರು, ಕಿರಿಯರು ಯಾರಾದರೂ ಸರಿ- ಕಂಡರೂ ಅದನ್ನು ಕುರಿತು ಭಾಷಣ ಮಾಡಲು ವಾಚಕರ ಕೈಗೆ ತಲುಪಿಸಲು ಯತ್ನಿಸುತ್ತಿದ್ದರು. ಇವರ ಹಾಗೆ ಕನ್ನಡ ಪ್ರಕಟಣ ಪ್ರಪಂಚದ ಸುಖ ದುಃಖಗಳನ್ನು ಬಲ್ಲವರು ವಿರಳ. ತಮ್ಮ ಹಿರಿಯರ ಮಿತ್ರರ ನೆನಪಿನಲ್ಲಿ 7 ಗ್ರಂಥ ಪ್ರಕಾಶನ ಮಾಲೆಗಳನ್ನು ನಡೆಸಿದರು. ಸಾಹಿತ್ಯ ವಿಚಾರ ಪ್ರಸಾರಕ್ಕಾಗಿ ವಿವಿಧ ಸಂಘಸಂಸ್ಥೆಗಳಲ್ಲಿ ರೂ. 39,000 ಮೊತ್ತದ 36 ದತ್ತಿಗಳನ್ನು ಸ್ಥಾಪಿಸಿದರು. ಶ್ರೀ ಅವರ ನೆನಪಿನಲ್ಲಿ ಶ್ರೀಗುಂಧಕುಟಿ ಗ್ರಂಥಭಂಡಾರವನ್ನು ಕಟ್ಟಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೂ ಇವರ ಸೇವೆ ಕಡಿಮೆಯಾಗಿಲ್ಲ.
ಇವರ ಈ ಅನುಪಮ ಸಾಧನೆಯನ್ನು ನಾಡು ಗುರುತಿಸಿತು. ಚೀನಾದೇಶದ ಬೌದ್ಧ ಯಾತ್ರಿಕರು, ರತ್ನನ ಪದಗಳು, ಬುದ್ಧವಚನಪರಿಚಯ, ಬುದ್ಧನ ಕತೆಗಳು ಇವಕ್ಕೆ ದೇವರಾಜ ಬಹಾದ್ದೂರ್ ದತ್ತಿಬಹುಮಾನ ಸಂದಿತು. ಈ ಪ್ರಶಸ್ತಿಯ ಹ್ಯಾಟ್ರಿಕ್ ಇವರಿಗೆ ಸಂದದ್ದು ವಿಶೇಷ. ಬಳ್ಳಾರಿಯ 23ನೆಯ ಕನ್ನಡ ಸಾಹಿತ್ಯ ಸಮ್ಮೇಳನ (1938) ಹಾಗೂ ರಬ ಕವಿಯ 28ನೆಯ ಕನ್ನಡಸಾಹಿತ್ಯ ಸಮ್ಮೇಳನದ (1944) ಲೇಖಕರ ಗೋಷ್ಠಿಯ ಅಧ್ಯಕ್ಷತೆ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ (1969), ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (1972), ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್. ಪದವಿ (1977), ದೆಹಲಿಯಲ್ಲಿ ನಡೆದ 50ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (1978), 51ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಮಕ್ಕಳ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ (1979) ಇವರಿಗೆ ಸಂದ ಗೌರವಗಳಲ್ಲಿ ಮುಖ್ಯವಾದವು. ರಾಜರತ್ನಂ (1957), ನಮ್ಮ ರಾಜರತ್ನಂ (1969) ಇವರಿಗೆ ಸಂದ ಗೌರವ ಗ್ರಂಥಗಳು. ಜೀವರತ್ನ (1979), ಸಾಹಿತ್ಯ ಪರಿಚಾರಕ (1979), ರಾಜಮಾರ್ಗ (1980) ಇವರ ಸಂಸ್ಮøತಿಗಳು. 								 
  (ವಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ